ಕೂಂಟ್, ಆಗಸ್ಟ್ ಅಡಾಲ್ಫ್ ಎಡೂಅರ್ಡ್ ಎಬರ್‍ಹಾರ್ಡ್
 1839-1894. ಜರ್ಮನಿಯ ಭೌತವಿಜ್ಞಾನಿ. ಜನನ 1839 ನವೆಂಬರ್18 ರಂದು. ಮೆಕ್ಲೆನ್ ಬರ್ಗಿನ ಷ್ವೇರಿನ್ ಎಂಬಲ್ಲಿ ವಿದ್ಯಾಭ್ಯಾಸ ಮಾಡಿ ಅನಂತರ ಬರ್ಲಿನ್ನಿಗೆ ಹೋದ. 1867ರಲ್ಲಿ ಬರ್ಲಿನ್ ವಿಶ್ವವಿದ್ಯಾಲಯದಲ್ಲಿ ಪ್ರೈವೇಟ್ ಡೋಜೆಂಟ್ ಆಗಿದ್ದು ಮಾರನೆಯ ವರ್ಷ ಜ್ಯೂರಿಚಿನ ಪಾಲಿಟೆಕ್ನಿಕಿನಲ್ಲಿ ಭೌತವಿಜ್ಞಾನದ ಪ್ರಾಧ್ಯಾಪಕನಾದ. 1872ರಲ್ಲಿ ಸಾಟ್ರsಸ್‍ಬರ್ಗಿನ ಭೌತವಿಜ್ಞಾನ ಸಂಸ್ಥೆಯನ್ನು ಸ್ಥಾಪಿಸಿದ. ಬರ್ಲಿನ್ ಭೌತವಿಜ್ಞಾನ ಸಂಸ್ಥೆಯಲ್ಲಿ ಹೆಲ್ಮೋಲ್ಟ್ಜನ ಅನಂತರ ನಿರ್ದೇಶಕನಾಗಿ ಈತನ ಆಯ್ಕೆಯಾದದ್ದು 1888ರಲ್ಲಿ ಈತ ಸತ್ತಿದ್ದು 1894ರ ಮೇ 21 ರಂದು.

ಕೂಂಟನ ಪ್ರಧಾನ ಸಂಶೋಧನೆಗಳು ಶಬ್ದ ಮತ್ತು ಬೆಳಕುಗಳನ್ನು ಕುರಿತು. ಕೊಳವೆಯೊಳಗೆ ಸ್ಥಾಯೀ ತರಂಗಗಳನ್ನು ಪರಿಶೀಲಿಸುವ ಒಂದು ಹೊಸ ವಿಧಾನವನ್ನೀತ ಶೋಧಿಸಿದ. ಅತ್ಯಂತ ಹಗುರವಾದ ಲೈಕೋಪೋಡಿಯಂ ಪುಡಿಯನ್ನು ಒಂದೇ ಸಮನಾಗಿ ಕೊಳವೆಯೊಳಗೆ ಉದ್ದಕ್ಕೂ ಚೆಲ್ಲಿ ನಿಸ್ಪಂದಗಳನ್ನು (ನೋಡ್ಸ್) ಹೇಗೆ ಪ್ರದರ್ಶಿಸಬಹುದೆಂಬುದನ್ನು ತೋರಿಸಿಕೊಟ್ಟ. ಈ ವಿಧಾನದಿಂದ ಶಬ್ದದ ವೇಗವನ್ನು ಘನವಸ್ತುಗಳಲ್ಲೂ ಮತ್ತು ಅನಿಲಗಳಲ್ಲೂ ಕಂಡುಹಿಡಿಯಬಹುದು. ದ್ರವ ಮತ್ತು ಹಬೆಗಳಲ್ಲಿ ಬೆಳಕಿನ ಅಸಂಗತ ವರ್ಣವಿಭಜನೆಯನ್ನು (ಅನಾಮಲಸ್ ಡಿಸ್ಪರ್ಶನ್) ಕುರಿತು ನಡೆಸಿದ ಸಂಶೋಧನೆಗಳಿಗೆ ಈತನ ಹೆಸರು ಪ್ರಖ್ಯಾತವಾಗಿದೆ. ಕಾಂತದ್ಯುತಿಶಾಸ್ತ್ರದಲ್ಲೂ (ಮ್ಯಾಗ್ನೆಟೊ ಆಪ್ಟಿಕ್ಸ್) ಈತ ಸಂಶೋಧನೆಗಳನ್ನು ನಡೆಸಿದ್ದ. ಹಲವು ಅನಿಲ ಮತ್ತು ಹಬೆಗಳಲ್ಲಿ ಕಾಂತಕ್ಷೇತ್ರದ ಫಲವಾಗಿ ಬೆಳಕಿನ ಪಾಶ್ರ್ವೀಕೃತ ಸಮತಲ ತಿರುಗುವುದೆಂಬುದನ್ನು ಪ್ರಯೋಗದಿಂದ ತೋರಿಸಿದ.

(ಆರ್.ಎ.ಎ.)
(ಪರಿಷ್ಕರಣೆ: ಹೆಚ್.ಆರ್.ಆರ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ